ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಹಟ್ಟಿ ಗ್ರಾಮ ಹಾಗೂ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದಲ್ಲಿ ಜರುಗಿದ ಮನೆ ಕಳ್ಳತನ ಪ್ರಕರಣಗಳಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡಿದ್ದರು.
ಈ ಕಾರ್ಯಾಚರಣೆಯಲ್ಲಿ ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿ ಆರೋಪಿತನಾದ ಮಂಜುನಾಥ ತಂದೆ ಹನುಮಂತಪ್ಪ ಮೋಡಿಕೇರ, ಸಾಃ ಶಿರಹಟ್ಟಿ, ಜಿಲ್ಲೆ ಗದಗ ಇತನನ್ನು ಬಂಧಿಸಿದ್ದಾರೆ.
ಆರೋಪಿತನಿಂದ ಸುಮಾರು 50 ಗ್ರಾಂ ಬಂಗಾರದ ಆಭರಣಗಳು, 80 ಗ್ರಾಂ ಬೆಳ್ಳಿಯ ಆಭರಣಗಳು, 40,000 ರೂಪಾಯಿ ರೋಖ ಹಣ ಹಾಗೂ ಒಂದು ಮೋಟಾರ್ ಸೈಕಲ್ ಮತ್ತು ಒಂದು ಮೊಬೈಲ್ ಸೇರಿದಂತೆ ಸುಮಾರು 4,80,000 ರೂಪಾಯಿಗಿಂತಲೂ ಅಧಿಕ ಕಿಮ್ಮತ್ತಿನ ಸ್ವತ್ತನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆ ಧಾರವಾಡ ಜಿಲ್ಲೆ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಹುಬ್ಬಳ್ಳಿ ಗ್ರಾಮೀಣ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಶಿವಾನಂದ ಕಟಗಿ ರವರ ಮುಂದಾಳತ್ವದಲ್ಲಿ ನಡೆದಿದೆ.
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚನ್ನಣ್ಣವರ, ನವಲಗುಂದ ವೃತ್ತದ ಸಿಪಿಐ ರವಿ ಕಪ್ಪತ್ತಣವರ, ಪಿಎಸ್ಐ ಇಮ್ರಾನ್ ಪಠಾಣ್ ಮತ್ತು ಅಪರಾಧ ದಳದ ಸಿಬ್ಬಂದಿ, ಅಣ್ಣಿಗೇರಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿ ಚುರುಕಿನ ಕಾರ್ಯಾಚರಣೆ ನಡೆಸಿ ಸದರಿ ಆರೋಪಿತನನ್ನು ಬಂಧಿಸಿ, ಹುಬ್ಬಳ್ಳಿ ಗ್ರಾಮೀಣ ಮತ್ತು ಧಾರವಾಡ ಗ್ರಾಮೀಣ ಎರಡೂ ಠಾಣೆಗಳ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.
ಒಟ್ಟು 2 ಜನ ಆರೋಪಿತರಲ್ಲಿ ಇನ್ನೊಬ್ಬ ಆರೋಪಿತನು ಪರಾರಿ ಇದ್ದು, ಅವನ ಬಂಧನಕ್ಕೂ ಬಲೆ ಬೀಸಲಾಗಿದೆ.
ಧಾರವಾಡ ಜಿಲ್ಲಾ ಎಸ್ ಪಿ ಅವರು ಈ ಪ್ರಕರಣವನ್ನು ಸಿನಿಮೀಯ ರೀತಿಯಲ್ಲಿ ಭೇದಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಮುರುಗೇಶ ಚನ್ನಣ್ಣವರ ಹಾಗು ಸಿಪಿಐ ನವಲಗುಂದ ವೃತ್ತ ಹಾಗೂ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.